ಚಾಲ್ತಿ ಆಸ್ತಿಗಳು-
ಚಾಲ್ತಿ ಆಸ್ತಿಯೆಂದರೆ ಶೀಘ್ರವಾಗಿ ನಗದಾಗಿಸಬಹುದಾದ ಆಸ್ತಿ.  ಉದಾಹರಣೆಗೆ ಸರಕುಗಳು, ಸಂಕೀರ್ಣ ಸಾಲಗಾರರು, ಪಾವತಿಬರುವ ಬಿಲ್ಸ್‍ಗಳು, ಹೂಡಿಕೆಗಳು, ಪೂರ್ವಪಾವತಿಯಾದ ವೆಚ್ಚಗಳು ಮೊದಲಾದವುಗಳು. ಸಾಮಾನ್ಯವಾಗಿ ಚಾಲ್ತಿ ಆಸ್ತಿಗಳು ನಗದಾಗಿಸಲು ವರ್ಷಕ್ಕಿಂತ ಹೆಚ್ಚು ಕಾಲಾವಧಿ ತೆಗೆದುಕೊಳ್ಳುವುದಿಲ್ಲ. ಒಟ್ಟಿನಲ್ಲಿ ಕ್ಷಿಪ್ರ ಕಾಲದಲ್ಲಿ ನಗದಾಗಿ ಪರಿವರ್ತಿಸಬಹುದಾದ ಆಸ್ತಿಗಳು ಚಾಲ್ತಿ ಆಸ್ತಿ ರೂಪದಲ್ಲಿರುತ್ತವೆ. 

ಒಂದು ವ್ಯವಹಾರ ಸಂಸ್ಥೆ ಪಡೆದಿರುವ ಅನಿರ್ಬಂಧಿತ ನಗದು ಸಮಾನವಾದ ಆಸ್ತಿ. ದೀರ್ಘಕಾಲದಲ್ಲಿ ನಗದಿಗೆ ಅಥವಾ ಅದಕ್ಕೆ ಸಮಾನವಾದ ಇತರ ಆಸ್ತಿಗಳಿಗೆ ಪರಿವರ್ತಿಸುವ ಸಲುವಾಗಿ ಹೊಂದಿರುವ ಆಸ್ತಿಗಳು, ಉಪಯುಕ್ತ ಸರಕುಗಳು ಮತ್ತು ಸೇವೆಗಳು (ಕರೆಂಟ್ ಅಸೆಟ್ಸ್). ಇವನ್ನು ಚರ ಆಸ್ತಿಗಳು (ಪ್ಲೋಟಿಂಗ್ ಅಸೆಟ್ಸ್) ಎಂದೂ ಕರೆಯಲಾಗಿದೆ.

ನಗದಾಗಿ ಅಥವಾ ನಗದಿಗೆ ಸಮಾನವಾದ ಇತರ ಆಸ್ತಿಗಳಾಗಿ ಪರಿವರ್ತನೆಗೊಳ್ಳುವ ಅವಧಿ ಸಾಮಾನ್ಯವಾಗಿ ಒಂದು ವರ್ಷ ಅಥವಾ ಅದಕ್ಕಿಂತ ಕಡಿಮೆ. ಕೆಲವು ಆಸ್ತಿಗಳ ಪರಿವರ್ತನೆಯ ಅವಧಿ ಇನ್ನೂ ದೀರ್ಘವಾಗಿರುವುದುಂಟು. ನಗದು, ತಾತ್ಕಾಲಿಕ ವಿನಿಯೋಜನೆಗಳು (ಇನ್ವೆಸ್ಟ್‍ಮೆಂಟ್ಸ್), ಪ್ರಾಪ್ಯ ಬಾಕಿಗಳು, ಕಚ್ಚಾ ಸಾಮಗ್ರಿ, ಅರ್ಧ ಮತ್ತು ಪೂರ್ಣಸಿದ್ಧ ಸರಕುಗಳು-ಇವು ಸಾಮಾನ್ಯವಾಗಿ ಚರ ಆಸ್ತಿಗಳೆನಿಸಿಕೊಳ್ಳುತ್ತವೆ. ಸರಕು ಸೇವೆಗಳ ಉತ್ಪಾದನೆಯ ಕಾರ್ಯದಲ್ಲಿ ದೀರ್ಘಕಾಲದಲ್ಲಿ ಉಪಯುಕ್ತವಾಗುವ ಮೂರ್ತ ವಸ್ತುಗಳು ಸ್ಥಿರ ಆಸ್ತಿಗಳು ಅಥವಾ ಬಂಡವಾಳ ಆಸ್ತಿಗಳು (ಉದಾ : ಕಟ್ಟಡ, ನಿವೇಶನ, ಯಂತ್ರೋಪಕರಣಗಳು ಇತ್ಯಾದಿ).

ಒಂದು ವ್ಯಾಪಾರಸಂಸ್ಥೆಯ ಆಸ್ತಿಗಳಲ್ಲಿ ಸ್ಥಿರ ಆಸ್ತಿಗಳು ಯಾವುವು. ಚರ ಆಸ್ತಿಗಳು ಯಾವುವು ಎಂಬುದು ಆ ಸಂಸ್ಥೆಯ ವ್ಯವಹಾರದ ಸ್ವರೂಪದ ಮೇಲೆ ನಿರ್ಧರಿಸಲ್ಪಡುತ್ತದೆ. ಒಂದು ಸಂಸ್ಥೆಯ ಚರ ಆಸ್ತಿಗಳು ಬೇರೊಂದು ಸಂಸ್ಥೆಯಲ್ಲಿ ಸ್ಥಿರ ಆಸ್ತಿಗಳೆನಿಸಬಹುದು. ಉದಾಹರಣೆಗೆ ಜವಳಿ ಗಿರಣಿಗೆ ಅದರ ಯಂತ್ರೋಪಕರಣಗಳು ಸ್ಥಿರ ಆಸ್ತಿಗಳಾದರೆ, ಯಂತ್ರೋಪಕರಣಗಳನ್ನು ವಿಕ್ರಯಿಸುವ ಸಂಸ್ಥೆಗೆ ಅವು ಚರ ಆಸ್ತಿಗಳು. ಹೈನು ಸಂಸ್ಥೆಗೆ ವಾಹನಗಳು ಸ್ಥಿರ ಆಸ್ತಿಗಳಾದರೆ ವಾಹನಗಳನ್ನು ವಿಕ್ರಯಿಸುವ ಸಂಸ್ಥೆಗೆ ಅವು ಚರ ಆಸ್ತಿಗಳು.

ಆಸ್ತಿ-ಜವಾಬ್ದಾರಿ ತಃಖ್ತೆ (ಬ್ಯಾಲೆನ್ಸ್ ಷೀಟ್) ತಯಾರಿಸುವಾಗ ಚರ ಆಸ್ತಿಗಳ ಮೌಲ್ಯನಿರ್ಧಾರ ವಿಧಾನ ಸ್ಥಿರ ಆಸ್ತಿಗಳ ಮೌಲ್ಯ ನಿರ್ಧಾರ ವಿಧಾನಕ್ಕಿಂತ ಭಿನ್ನವಾದ್ದು. ಸ್ಥಿರ ಆಸ್ತಿಯ ಮೌಲ್ಯವನ್ನು ನಿರ್ಧರಿಸುವಾಗ ಅದರ ಅಸಲಿನಲ್ಲಿ ಸವಕಳಿಯ ಮೊಬಲಗನ್ನು ಕಳೆದು ಉಳಿದ ಮೊಬಲಗನ್ನು ಅದರ ಪ್ರಚಲಿತ ಮೌಲ್ಯವೆಂದು ತೋರಿಸಲಾಗುವುದು. ಆದರೆ ಚಾಲ್ತಿ ಆಸ್ತಿಗಳ (ನಗದು ಹೊರತು ಪಡಿಸಿ) ಮೌಲ್ಯ ನಿರ್ಧರಿಸಲು ಆಯಾ ಆಸ್ತಿಗಳ ಸ್ವರೂಪಗಳಿಗೆ ಅನುಗುಣವಾದ ವಿಧಾನ ಅನುಸರಿಸಲಾಗುವುದು. ಸಾಮಗ್ರ, ಸರಕುಗಳು ಮತ್ತು ಹೂಡಿಕೆಗಳು ಮಾರುಕಟ್ಟೆ ಬೆಲೆಯನ್ನು, ಇಲ್ಲವೇ ಅಸಲು ಮತ್ತು ಖರ್ಚುಗಳ ಮೊತ್ತವನ್ನು-ಇವೆರಡರಲ್ಲಿ ಯಾವುದು ಕಡಿಮೆಯೋ ಅದನ್ನು-ಅವುಗಳ ಪ್ರಚಲಿತ ಮೌಲ್ಯವೆಂದು ತೋರಿಸಲಾಗುವುದು. ಪ್ರಾಪ್ಯ ಬಾಕಿಗಳ ಮೌಲ್ಯ ನಿಷ್ಕರ್ಷೆ ಮಢುವಾಗ ಅವು ಎಷ್ಟು ಕಾಲದಿಂದ ಬಾಕಿಗಳಾಗಿ ಉಳಿದಿವೆಯೆಂಬುದನ್ನೂ ಅವುಗಳಲ್ಲಿ ಅನುಮಾನವಾದ ಮೊಬಲಗು ಎಷ್ಟೆಂಬುದನ್ನೂ ಪರಿಗಣಿಸಬೇಕು. ಚಾಲ್ತಿ ಆಸ್ತಿಗಳನ್ನು ನಗದಿಗೆ ಪರಿವರ್ತಿಸಿದಾಗ ಎಷ್ಟು ಮೊಬಲಗು ಬರಬಹುದೆಂಬುದು ಇವುಗಳ ಮೌಲ್ಯಗಳನ್ನು ನಿರ್ಧರಿಸುವಾಗ ಮುಖ್ಯವಾಗಿ ಪರಿಗಣಿಸಬೇಕಾದ ಅಂಶ. ಆಸ್ತಿ-ಹೊಣೆ ತಃಖ್ತೆಯನ್ನು ವಿಶ್ಲೇಷಿಸುವ ತಜ್ಞರು ಚಾಲ್ತಿ ಆಸ್ತಿ ಹಾಗೂ ಚಾಲ್ತಿ ಜವಾಬ್ದಾರಿಗಳ ಅನುಪಾತವನ್ನು ಗುರುತಿಸಿ, ಅದರ ಆಧಾರದಿಮದ ಸಂಸ್ಥೆಯ ಚಾಲ್ತಿ ಸ್ಥಿತಿಗತಿ ಅರಿಯುತ್ತಾರೆ.  ಇದು ಸಾಲ-ಮುಂಗಡಗಳನ್ನು ಕೊಡುವಾಗ ಬಹಳ ಉಪಯೋಗಕ್ಕೆ ಬರುವುದಲ್ಲದೆ ಅದಕ್ಕೆ ಆಧಾರವೂ ಆಗುತ್ತದೆ. 
(ಎಂ.ಆರ್.ಕೆಆರ್.; ಸಿ.ಎಂ.ಎಂ)
(ಪರಿಷ್ಕರಣೆ: ಜಿ.ಆರ್.ವಿ;ವೈ.ಕೆ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ